Sunday, November 08, 2009

at 12:57:00 AM Posted by Srikanth - ಶ್ರೀಕಾಂತ 6 comments

ಜ್ಞಾನ ಸಾಸಿವೆಯಷ್ಟು, ಅಜ್ಞಾನ ಬಹಳಷ್ಟು;
ವಿಜ್ಞಾನ ಪದವೀಗೆ ಇರುವ ಬೆಲೆಯಿಷ್ಟು!
ವಿಜ್ಞಾನ ಪದವಿಯೋ? ಅಜ್ಞಾನ ಪದವಿಯೋ?
ತಲೆಯಾಗೆ ಏನದೋ? ಮೇಲಂತು ಟೋಪಿ!

ಬಳಿಯ ತಿಳಿವೂ ತಿಳಿಯೆ; ಉಳಿದ ತಿಳಿವೂ ತಿಳಿಯೆ;
ನಾಳಿನಂಗಳ ತಿಳಿಯೆ ಇಂದಿನಂಗಳವಳಿಯೆ;
ಬಾಳಿನಾಳವ ತಿಳಿಯೆ; ಬೀಳದಿರುವುದ ತಿಳಿಯೆ;
ಬಿಳಿಯ ಹಾಳೆಯ ತಲೆಯ ಮೇಲಂತು ಕರಿ ಟೋಪಿ!

ಬಳಿ ಬಂದ ಭಾಗ್ಯವನು ದೂರ ನೂಕುವುದುಂಟೆ?
ಸುಪ್ತಾತ್ಮಸಾಕ್ಷಿಯನು ಎಬ್ಬಿಸದೆ ಮಲೆತೆನೋ!
ಬಿಳಿಹಾಳೆ ತುಂಬಿಸಲು ಪದವಿ ಹೆಸರೇ ಬೇಕೆ?
ತಲೆಯಾಗೆ ಏನಿಲ್ಲ! ಅದಕೆ ಹಾಕಿದೆ ಟೋಪಿ!

Friday, July 24, 2009

at 11:05:00 PM Posted by Srikanth - ಶ್ರೀಕಾಂತ 3 comments

ಈಗೊಂದು ತಿಂಗಳಿಂದ ಮಳೆಯ ಬಗೆಗಿನ ಮಾತುಗಳು ಸ್ವಲ್ಪ ಹೆಚ್ಚಾಗಿಯೇ ಕೇಳಿ ಬರುತ್ತಿವೆ. ತಿಂಗಳ ಹಿಂದೆ ಮಳೆ ಇನ್ನೂ ಕರ್ನಾಟಕದಲ್ಲಿ ಬರದಿದ್ದಾಗ ದಿನಕ್ಕೆ ಎರಡು ಘಂಟೆ ವಿದ್ಯುಚ್ಛಕ್ತಿಯಿಲ್ಲದೇ ಅಂಗವಿಕರಲಂತೆ ವ್ಯಥೆಪಟ್ಟು ಕುಡಿಯುವ ನೀರಿಗೆ ಈ ವರ್ಷ ಏನು ಗತಿಯೋ ಎಂದು ಆಗೊಮ್ಮೆ ಈಗೂಮ್ಮೆ ಅಂತ ಬಿಸಿಲನ್ನು ಬೈದು ತೃಪ್ತಿ ಪಡುತ್ತಿದ್ದ ಜನರು ಈಗ ಒಂದಷ್ಟು ದಿನದಿಂದ ಸ್ವಲ್ಪ ಜಾಸ್ತಿ ಮಳೆ ಸುರಿದಿರುವುದನ್ನು ಕೇಳಿ "ಮಳೆ ಬೇಕು; ಆದರೆ, ಇಷ್ಟೊಂದು ಬೇಡ" ಎಂದು, "ಬೆಂಗಳೂರಿನಲ್ಲಿ ಮಳೆ ಸಾಲದು" ಎಂದು ಮತ್ತು "ಮಲೆನಾಡಿನ ಹತ್ತಿರವೇ ಸುಳಿಯಬಾರದು ಈ ಮಳೆಗಾಲದಲ್ಲಿ" ಎಂದು ಹೇಳುತ್ತಿದ್ದಾರೆ. ಆದರೆ ಮಳೆ ಬಂದೊಡನೆಯೇ ಮಳೆ ಸಾಕಾಗಿ ಬಿಸಿಲನ್ನು ನೋಡುವ ಆಸೆಯಾಗುತ್ತದೆ! ಆಗ ಮಳೆಯನ್ನು ಬೈಯ್ಯುವ ಸರದಿ. ಯಾಕೋ ನಮ್ಮ ಈ ಮನೋಭಾವ ಸರಿಯಿಲ್ಲ ಎಂದು ಒಮ್ಮೊಮ್ಮೆ ಅನ್ನಿಸುತ್ತಿರುತ್ತದೆ.

ಬೇಸರವಾಗುತ್ತದೆ, ವಿಸ್ಮಯವಾಗುತ್ತದೆ, ದಾರಿ ಕಾಣದೇ ಹೋಗುತ್ತದೆ... ಜನರಿಗೆಲ್ಲಾ ಚಿರಕಾಲ ತೃಪ್ತಿ ಕೊಡುವಂಥದೊಂದನ್ನು ಈ ಪ್ರಪಂಚದಲ್ಲಿ ಹುಡುಕಲು ಪ್ರಯತ್ನಿಸಿದಾಗ. ಇವತ್ತು ಇಷ್ಟು ಮಳೆ ಬೇಡ ಅಂದವರು ಮಳೆಯೇನಾದರೂ ಕಡಿಮೆ ಆಗಿದ್ದರೆ ಆಗ ಮಳೆ ಕಡಿಮೆ ಎಂದೋ ಅಥವಾ ಅದೂ ಹೆಚ್ಚಾಯಿತು ಎಂದೋ ಹೇಳುವುದು ಖಚಿತವಷ್ಟೇ. ಮಳೆಯೊಂದನ್ನೇ ಅಲ್ಲ, ಬಿಸಿಲನ್ನು ಮತ್ತು ಚಳಿಯನ್ನು ಕೂಡ ಹೀಗೇ. ಬಳ್ಳಾರಿಯಿಂದ ಬೆಂಗಳೂರಿಗೆ ಬಂದು ಬಳ್ಳಾರಿಯಂತೆಯೇ ಬಿಸಿಲನ್ನು ಅಪೇಕ್ಷಿಸಿ ಚಳಿ ಚಳಿ ಎಂದು ನಡುಗುವವರಿದ್ದಾರೆ. ಮಡಿಕೇರಿಯಿಂದ ಬಂದು ಬೆಂಗಳೂರಿನಲ್ಲಿ ಬಿಸಿಲು ಜಾಸ್ತಿ ಎನ್ನುವವರೂ ಇದ್ದಾರೆ. ಎಲ್ಲರೂ ತಮ್ಮ ಮೂಗಿನ ನೇರಕ್ಕಲ್ಲದಿದ್ದರೂ ತಾವು ಒಗ್ಗಿಕೊಂಡ ಹವಾಮಾನದ ನೇರಕ್ಕೇ ಮಾತನಾಡುತ್ತಾರೆ. ಪಾಪ, ಆ ದೇವರ ಪರಿಸ್ಥಿತಿ ಶೋಚನೀಯ! ಬಳ್ಳಾರಿಯವನಿಗೆ ಬಿಸಿಲನ್ನು ಕರುಣಿಸಬೇಕೋ, ಮಡಿಕೇರಿಯವನಿಗೆ ಚಳಿಯನ್ನು ಕರುಣಿಸಬೇಕೋ ಅಥವಾ ಬೆಂಗಳೂರಿನವನಿಗೆ ಬಿಸಿಲೂ ಇಲ್ಲ ಚಳಿಯೂ ಇಲ್ಲ ಎನ್ನುವಂಥ ಹವೆಯನ್ನು ಕರುಣಿಸಬೇಕೋ!

ಸುಮಾರು ಆರು ತಿಂಗಳ ಹಿಂದೆ ಒಂದು ಮಧ್ಯಾಹ್ನ ಮಣಿಪಾಲದಲ್ಲಿ ಗೆಳೆಯರೊಡನೆ ನಡೆದು ಹೋಗುತ್ತಿದ್ದೆ. ಸುಡುವಂಥ ಬಿಸಿಲು. ಒಬ್ಬ ಗೆಳೆಯ, ಬೆಂಗಳೂರಿನವ, ಮನಸ್ಸಿಗೆ ಬಂದಷ್ಟೂ ಸೂರ್ಯನನ್ನು ಬೈದುಕೊಂಡ. "ಬೆಂಗಳೂರಲ್ಲಿ ಇದ್ದಷ್ಟು ಬಿಸಿಲಿರಬೇಕು.. ಇಷ್ಟೊಂದು ಬಿಸಿಲು! ಸಾಯೋ ಅಂಥ ಸೆಕೆ! ಥೂ" ಎಂದು ಬೈದುಕೊಳ್ಳುತ್ತಿದ್ದ. ಅಂದು ಯಾಕೋ ಈ ಬೈಗುಳದ ಬಿಸಿ ನನ್ನನ್ನು ಸುಡುತ್ತಿತ್ತು. "ಅಲ್ಲೋ, ಮಣಿಪಾಲದಲ್ಲಿ ಬಿಸಿಲು ಅಂತ ಗೊತ್ತು. ಸೆಕೆ ಅಂತನೂ ಗೊತ್ತು. ಎಲ್ಲಾ ಗೊತ್ತಿದ್ದೂ ಇಲ್ಲಿಗೆ ಬಂದು ಬೈಕೊಂಡ್ರೆ ಯಾರ ತಪ್ಪೋ? ಬೆಂಗಳೂರಿನ ಬಿಸಿಲು ಚೆನ್ನಾಗಿದೆ ಅನ್ನೋದಾದರೆ ಅಲ್ಲೇ ಇರಬೇಕಾಗಿತ್ತು. ಇಲ್ಲಿಗೆ ಯಾಕೆ ಬಂದಿ?" ಎಂದು ಕೇಳಿದೆ. "ಆದ್ರೂ ಇಷ್ಟೊಂದು ಬಿಸಿಲಿರಬಾರದೋ..." ಎಂದು ವಾದಕ್ಕೆ ಪ್ರತಿವಾದ ಜೋಡಿಸಲು ಹೊರಟ. "ಈಗ ನಿಂಗೆ ಬಿಸಿಲು ಜಾಸ್ತಿ. ಇವನಿಗೆ ನೋಡು. ಎಷ್ಟಾದರೂ ಇದೇ ಪ್ರದೇಶದಲ್ಲಿ ಹುಟ್ಟಿ ಬೆಳೆದವನು. ಚೂರು ಬಿಸಿಲು ಕಮ್ಮಿ ಆದರೂ ಚಳಿ ಆಗ್ತದೆ ಮಾರಾಯ ಅಂತ ಮೈ ಕಿವುಚಿಕೋತಾನೆ. ಸೂರ್ಯ ಪಾಪ ಯಾರ ಮಾತೋ ಕೇಳ್ಬೇಕು?" ಎಂದು ಕೇಳಿದೆ. ಅಲ್ಲಿಂದ ಬೆಂಗಳೂರಿಗೆ ಹೊರಡುವ ಒಂದೆರಡು ದಿನಗಳ ಮುಂಚೆ ಮತ್ತಿನ್ಯಾರೋ ಹೀಗೇ ಬಿಸಿಲನ್ನು ಶಪಿಸುತ್ತಿದ್ದಾಗಲಂತೂ ಕೋಪ ಬಂದು "ಬಿಸಿಲನ್ನು ಬೈಬೇಡ. ಇನ್ನೇನು ಬೆಂಗಳೂರಿಗೆ ಹೋಗ್ತೀಯಲ್ಲ. ಹೇಳೀ ಕೇಳೀ ಜನವರಿ ತಿಂಗಳು. ಈ ಬಿಸಿಲಿನ ಬೆಲೆ ಅಲ್ಲಿ ಗೊತ್ತಾಗತ್ತೆ. ಆಗ ಬೇಕು ಅಂದ್ರೂ ಸಿಗಲ್ಲ ಬಿಡು" ಎಂದು ಬೇಸರದಿಂದ ಹೇಳಿಬಿಟ್ಟೆ.

ಇಂಥ ವಿಷಯಗಳಿಗೆಲ್ಲಾ ಗೆಳೆಯರ ಬಗ್ಗೆ ಬೇಸರ ಪಟ್ಟುಕೊಳ್ಳುವುದು ಅದೆಂಥ ಅಸ್ವಾಭಾವಿಕ ಎಂದು ಅಪಹಾಸ್ಯ ಮಾಡಿದವರುಂಟು. ಆದರೆ ನಾನು ನನಗೆ ತಿಳಿದವರ ಬಳಿಯಲ್ಲದೇ ಇನ್ಯಾರ ಬಳಿ ನನಗನ್ನಿಸಿದ್ದನ್ನು ಹೇಳಲಿ? ಇಂದು ಈ ಜಗತ್ತು ನಡಿಯುತ್ತಿದೆ ಎಂದರೆ ಅದು ಸೂರ್ಯನಿಲ್ಲದೆಯೇ ಸಾಧ್ಯವಿಲ್ಲ. ವಿದ್ಯುದ್ದೀಪಗಳನ್ನು ಹಚ್ಚುತ್ತೇವೆ, ನಮಗೆ ಬೆಳಕಿಗಾಗಿ ಸೂರ್ಯನ ಹಂಗು ಬೇಕಿಲ್ಲ ಎಂದರೆ ಅದೂ ಸರಿಯಿಲ್ಲ. ಸೂರ್ಯನ ಶಾಕದಿಂದಲೇ ಭೂಮಿಯ ಮೇಲಿರುವ ನೀರು ಆವಿಯಾಗಬೇಕು. ಆಮೇಲೆ ಮೋಡವಾಗಿ ನಂತರ ಮಳೆ ಸುರಿದರೆ ಮಾತ್ರ ನಮಗೆ ಕುಡಿಯಲು ನೀರು ಸಿಗುವುದು, ತಿನ್ನಲು ಆಹಾರ ಬೆಳೆಯುವುದು, ಜಲಪಾತಗಳಿಂದ ವಿದ್ಯುತ್ ತಯಾರಿಸಿ ವಿದ್ಯುದ್ದೀಪಗಳನ್ನುರಿಸಬಹುದು. ನೀರಿಲ್ಲದಿದ್ದರೆ ಆಮ್ಲ ಜನಕವನ್ನು ಜಗತ್ತಿಗೆ ಕೊಡುವ ಗಿಡ-ಮರಗಳೇ ಇರುವುದಿಲ್ಲ! ಅಂಥ ಸೂರ್ಯನಲ್ಲಿ ದೇವರನ್ನು ಕಂಡರು ನಮ್ಮ ಪೂರ್ವಜರು. ನಾವು ಈ ದೇವರು-ದಿಂಡರು ಇತ್ಯಾದಿಗಳನ್ನೆಲ್ಲಾ ಮರೆತು ಬದುಕಿದರೂ ಇಷ್ಟೊಂದು ಉಪಕಾರ ಮಾಡುತ್ತಿರುವ ಸೂರ್ಯನನ್ನು ಕೊನೆಯ ಪಕ್ಷ ತೆಗಳದೆ ಇರಬೇಕಲ್ಲವೇ?

ಮಳೆಯ ವಿಷಯವೂ ಹಾಗೇ. ಬೆಂಗಳೂರಿನವರಾದ ನಮಗಂತೂ ಮಳೆ ಕಂಡರಾಗದು. ತುಂತುರು ಮಳೆ ಶುರುವಾದರೆ ಸಾಕು, ದ್ವಿಚಕ್ರ ವಾಹನಗಳಲ್ಲಿ ಹೋಗುತ್ತಿರುವವರೆಲ್ಲಾ ಸಿಕ್ಕ-ಸಿಕ್ಕ ಕಡೆ ಮಳೆಯಿಂದ ರಕ್ಷಣೆ ಹುಡುಕಿ ನಿಂತುಬಿಡುತ್ತೇವೆ. ರಸ್ತೆಗಳು ಬಿಕೋ ಎಂದು ಇಪ್ಪತ್ತೈದು ವರ್ಷಗಳ ಹಿಂದಿನ ಬೆಂಗಳೂರಿನ ರಾಜಮಾರ್ಗಗಳಾಗಿ ಪರಿವರ್ತನೆಯಾಗುತ್ತವೆ! ಆದರೆ ಇದನ್ನು ಹೆಚ್ಚಿನ ಜನ ಗಮನಿಸದೇ ಮಳೆ ನಿಂತಿತೋ ಇಲ್ಲವೋ ಎಂದು ಮಾತ್ರ ನೋಡುತ್ತಿರುತ್ತಾರೆ! ಇಂಥ ನಮಗೆ ಇನ್ನು ಮಲೆನಾಡಿನ ಮಳೆಯಲ್ಲಿ ನೆಂದು ತೊಪ್ಪೆಯಾಗುವ ಪರಿಸ್ಥಿತಿ ಬಂದರಂತೂ ಎಲ್ಲಿಲ್ಲದ ಕೋಪ ಬಂದುಬಿಡುತ್ತದೆ! ಮಳೆರಾಯನಿಗೆ ಶಾಪಗಳ ಮಳೆ ಸುರಿಸುತ್ತಾರೆ! ಬಿಸಿಲಿಗೆ ಕಾರಣವಾದ ಸೂರ್ಯನಾದರೂ ಬರಿಗಣ್ಣ ನೋಟವನ್ನು ಕುರುಡು ಮಾಡುವ ತೇಜದ ವರ್ತುಲದಂತೆ ಗೋಚರಿಸುತ್ತಾನೆ; ಅವನಿಗೆ ಶಾಪ ಹಾಕುತ್ತಾರೆ ಎಂದರಾದರೂ ಸುಮ್ಮನಿರಬಹುದೇನೋ! ಆದರೆ ಮಳೆಯನ್ನು ಸುರುಸುವಾತ, ಅಂದರೆ ಮಳೆರಾಯ ಅಥವಾ ವರುಣ ಎಂದು ಕರೆಸಿಕೊಳ್ಳುವವನು ಕಾಣುವುದಿಲ್ಲವಲ್ಲ! ಸೂರ್ಯ ಕಂಡಾಗಲೆಲ್ಲಾ ಬಿಸಿಲು ಬರುವಂತೆ ಮೋಡ ಕಂಡಾಗಲೆಲ್ಲಾ ಮಳೆ ಬರುವುದಿಲ್ಲ. ಆದ್ದರಿಂದ ಸೂರ್ಯ ಬಿಸಿಲುರಾಯನಾದರೂ ಮೋಡವಂತೂ ಮಳೆರಾಯನಲ್ಲ. ಮಳೆ ಬರುವಾಗ ನಮಗೆ ಆಕಾಶದಲ್ಲಿನ್ನೇನೂ ಕಾಣುವುದಿಲ್ಲ. ಹಾಗಾಗಿ, ನಾವು ಮಳೆ ಸುರಿಯುವಾಗ ಬಾಯಿ ತುಂಬಾ ಬೈದುಕೊಂಡರೂ ಯಾರನ್ನು ಬೈಯ್ಯುತ್ತಿದ್ದೇವೆ ಎಂದು ನಮಗೇ ಗೊತ್ತಿಲ್ಲ! ನಾವು ಬೈದದ್ದರಿಂದ ಯಾರಿಗೇನಾಯಿತು? ಇದೆಂಥ ದುರಂತ!

ಹೆಚ್ಚಿನ ಜನರಿಗೆ ಮಳೆಯಲ್ಲಿ ನೆಂದು ತೊಪ್ಪೆಯಾಗುವ ಮಜವೇ ಗೊತ್ತಿಲ್ಲ ಎನ್ನಿಸುತ್ತದೆ ನನಗೆ. "Only a few people feel the rain. Others just get wet" ಎಂದು ಗೆಳೆಯ ಅರುಣ್ ನೆನ್ನೆ ಒಂದು ಎಸ್ಸೆಮ್ಮೆಸ್ ಕಳುಹಿಸಿದ್ದ. ಈ ಸಂದೇಶವನ್ನು ಮೊದಲು ಕಳುಹಿಸಿದವರ್ಯಾರು ಎಂದು ಅವನಿಗೂ ಗೊತ್ತಿಲ್ಲ. ಆದರೆ ಅವರು ಯಾರದರೂ ಅವರಿಂದ ನಾವು ಕಲಿಯುವುದು ಬೇಕಾದಷ್ಟಿವೆ. ಆಕಾಶದಿಂದ ಇಳಿದು ಬಂದು ಭೂಮಿಯನ್ನು ಇನ್ನೂ ಮುಟ್ಟದ ನೀರಿನ ಸ್ಪರ್ಶವೇ ಒಂದು ಆನಂದ. ಮಳೆಯ ರಭಸದಲ್ಲಿ ಹೆಚ್ಚು-ಕಡಿಮೆಯಾಗುವಾಗ ಉಂಟಾಗುವ ನಾದದ ಏರುಪೇರುಗಳಿಂದ ಅದ್ಭುತವಾದ ಸಂಗೀತ ಸೃಷ್ಟಿಯಾಗುತ್ತದೆ. ಮೆಲ್ಲನೆಯ ಗಾಳಿ ಮತ್ತು ಮನುಷ್ಯರನ್ನೇ ಹಾರಿಸಿಕೊಂಡು ಹೋಗುವ ಗಾಳಿಯ ನಡುವಿನ ಏರುಪೇರುಗಳಿಂದಾಗುವ ನಾದದಿಂದ ಕೂಡಿದ ಮಳೆಯ ನಾದ ಕೇಳಲು ಮತ್ತಷ್ಟು ಹಿತ! ಪ್ರಕೃತಿಯ ಮಧ್ಯೆ ಇದ್ದಾಗಲಂತೂ ಮಳೆಯೊಂದಿಗಿನ ಪ್ರಕೃತಿಯ ಚಿತ್ರವೇ ಅವಿಸ್ಮರಣೀಯ. ಬೆಟ್ಟಗಳ ಮೇಲೆ ಹೋದಾಗ ಗಾಳಿಯ ರಭಸಕ್ಕೆ ಸೊತು ಅಡ್ಡಡ್ಡ ಓಡಾಡುವ ಮಳೆಹನಿಗಳು ಬಾಣಗಳಂತೆ ನಮ್ಮನ್ನು ಚುಚ್ಚುವ ಪರಿಯೂ ವರ್ಣನಾತೀತ. ಕೊಡೆಯನ್ನು ಒಮ್ಮೆಯಾದರೂ ಮಡಚಿಟ್ಟು ಮಳೆಯನ್ನನುಭವಿಸದ ಜನರಿಗೆ ನನ್ನಿಂದ ಮಳೆಯ ಸುಖವನ್ನು ಅರ್ಥ ಮಾಡಿಸಲಾಗುವುದಿಲ್ಲ. ಅನುಭವಿಸಿದವರಿಗೆ ಅರ್ಥ ಮಾಡಿಸುವುದು ಬೇಕಿಲ್ಲ!

ಈಗಿನ ನಮ್ಮ ಜೀವನವಿಧಾನ ಮಳೆಯಲ್ಲಿ ಸದಾ ನೆನೆಯಲು ಬಿಡುವುದಿಲ್ಲ ಎಂಬ ಮಾತು ಒಪ್ಪಬೇಕಾದ್ದು. ಆದರೆ ಜೀವನಪರ್ಯಂತವೂ ಬಿಡುವಿಲ್ಲ ಎಂಬ ಕಾರಣವೊಡ್ಡಿ ನಾಲ್ಕು ಗೋಡೆಗಳ ಮಧ್ಯೆ ಬೆಚ್ಚಗೆ ಕುಳಿತರೆ ಪ್ರಕೃತಿಯ ಸೊಬಗನ್ನನುಭವಿಸುವ ಅವಕಾಶ ಹಾಳಾದಂತಷ್ಟೇ.

ಚಳಿಯ ವಿಷಯ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಚಳಿಗಾಲದಲ್ಲಿ ಬೆಂಗಳೂರನ್ನು ಬೈದುಕೊಂಡು ಬಿಸಿಲು ಬಂದಾಗ ಚಳಿಯನ್ನು ಹುಡುಕಿಕೊಂಡು ಉದಕಮಂಡಲಕ್ಕೆ ಹೋಗಿ ಸಾವಿರಾರು ರೂಪಾಯಿ ಸುರಿಯುವವರಿಗೆ ಪ್ರತ್ಯೇಕವಾಗಿ ಹೇಳಿದರೂ ಅರ್ಥವಾಗುವುದಿಲ್ಲ. ಚಳಿಯನ್ನು, ಮಳೆಯನ್ನು, ಬಿಸಿಲನ್ನು ಹುಡುಕಿಕೊಂಡು ಹೋಗುವುದು ತಪ್ಪಲ್ಲ. ತಪ್ಪು ಎಂದರೆ ನಾನು ಮಾಡುವುದನ್ನು ನಾನೇ ಖಂಡಿಸಿದಂತೆ. ಆದರೆ, ಚಳಿಗಾಲವನ್ನು ಚಳಿಯನ್ನು ಬೈಯ್ಯುವ ಕಾಲ ಮಾಡುವುದು ಸರಿಯಲ್ಲ ಎಂದೆ ಅಷ್ಟೇ. ಹಾಗೇ ಮಳೆಗಾಲ ಮತ್ತು ಬಿಸಿಲುಗಾಲಗಳು ಕೂಡ.

ಮಳೆಗೆ ಸಿಕ್ಕಿ ಕೊಚ್ಚಿಕೊಂಡು ಹೋದವರಿದ್ದಾರೆ, ಬಿಸಿಲು-ಚಳಿಗಳನ್ನು ತಡಿಯಲಾಗದೇ ಸತ್ತವರೂ ಇದ್ದಾರೆ. "ಸಾವು ಬದುಕಿಗಿಂತ ಸುಂದರ" ಎಂದು ವಾದಿಸುವವರಿದ್ದರೆ, ಅವರನ್ನು ಬಿಟ್ಟು ಬೇರೆ ಎಲ್ಲರಿಗೂ ಇವು ಬೇಸರದ ಸಂಗತಿಗಳೇ. ಆದರೆ ಬೈಯ್ಯುವುದಕ್ಕೆ ಕಾರಣವಿಲ್ಲ. ಏಕೆಂದರೆ ಬಿಸಿಲು-ಮಳೆ-ಚಳಿ-ಗಾಳಿಗಳಿಂದ ಎಷ್ಟು ಜನ ಸತ್ತಿರುವರೋ ಅದಕ್ಕೆ ಲಕ್ಷ-ಪಟ್ಟು ಜನ ಅವನ್ನೇ ಅವಲಂಬಿಸಿ ಬದುಕಿದ್ದೀವಿ. ಕೋಟ್ಯಂತರ ವರ್ಷಗಳ ಕಾಲ ಜೀವರಾಶಿಗೆ ಆಧಾರವಾಗಿರುವ ಸೃಷ್ಟಿಯ ವ್ಯವಸ್ಥೆಯನ್ನು ಕೆಲವೇ ದಶಕಗಳ ಕಾಲ ಬೆಳಕನ್ನು ಕಂಡ ನಾವು ತೆಗಳಿದರೆ ಅದು ನಮ್ಮ ಅಜ್ಞಾನದ ಪರಮಾವಧಿಯಷ್ಟೇ.

Tuesday, July 14, 2009

at 3:43:00 PM Posted by Srikanth - ಶ್ರೀಕಾಂತ 0 comments

ಹೊಸ ಸಂಸ್ಕೃತಿ-ಪದ್ಧತಿಗಳೇ ಹೆಚ್ಚಾಗಿರುವ ಇಂದಿನ ದಿನಗಳಲ್ಲಿ ವಿರಳವಾಗುತ್ತಿರುವ "ಗಮಕ" ಎಂಬ ಒಂದು ಸುಂದರವಾದ ಗಾಯನಪದ್ಧತಿಯನ್ನು ಮರುಪರಿಚಯಿಸಹೊರಟಿದೆ ಪ್ರಣತಿ. ಈ ಕಾರ್ಯಕ್ರಮಕ್ಕೆ ನಾನು ಪ್ರಣತಿ ತಂಡದ ಪರವಾಗಿ ಎಲ್ಲರನ್ನೂ ಆಹ್ವಾನಿಸುತ್ತೇನೆ. ಕಾರ್ಯಕ್ರಮದ ವಿವರಗಳು ಕೆಳಗಿನ ಆಹ್ವಾನ ಪತ್ರಿಕೆಯಲ್ಲಿದೆ. ಖಂಡಿತವಾಗಿ ಬನ್ನಿ.

Tuesday, June 02, 2009

at 10:36:00 AM Posted by Srikanth - ಶ್ರೀಕಾಂತ 4 comments

ಪ್ರತಿ ವರ್ಷದಂತೆ ಮತ್ತೆ ಹುಟ್ಟುಹಬ್ಬ ಬಂದಿತ್ತು ನೆನ್ನೆ; ಇಪ್ಪತ್ತೈದನೆಯ ಬಾರಿಗೆ. ಕಳೆದ ಕಾಲದಲ್ಲಿ ಗಳಿಸಿದ್ದು ಏನೆಂದು ಗೊತ್ತಿರುವುದಿರಲಿ, ಕಳೆದ ಕ್ಷಣಗಳು ಎಷ್ಟು ಎಂದೂ ಅರಿಯದೇ ಬದುಕಿದ್ದೇನೆ - ಇಪ್ಪತ್ತೈದು ವರ್ಷ.

ಆದರೂ, ಬಹಳಷ್ಟು ಜನರು ಪ್ರೀತಿಯಿಂದ ನನಗೆ ಶುಭ ಹಾರೈಸಿದ್ದೀರಿ. ದೂರದಿಂದ ಬಂದು ಶುಭಾಶಯಗಳನ್ನು ಹೇಳಿದವರಿದ್ದಾರೆ. ಫೋನಿನಲ್ಲಿ, ಎಸ್.ಎಮ್.ಎಸ್ ಮೂಲಕ, ಆರ್ಕುಟ್ ಮೂಲಕ ಹತ್ತಿರದಿಂದ ಶುಭಾಶಯ ಹೇಳಿದವರಿದ್ದಾರೆ. ಎಲ್ಲರಿಗೂ ಧನ್ಯವಾದಗಳು. ನಿಮ್ಮ ಪ್ರೀತಿ ಸದಾ ಹೀಗೇ ಇರಲಿ :-)

ಯಾರ್ಯಾರನ್ನು ಯಾವಾಗ ಎಷ್ಟೆಷ್ಟು ನೋಯಿಸಿದೆನೋ ನಲಿಸಿದೆನೋ ಗೊತ್ತಿಲ್ಲ. ನೋಯಿಸಿದ್ದರೆ ಅದಕ್ಕೆ ಕ್ಷಮೆ ಇರಲಿ. ನಮ್ಮ ಸ್ನೇಹ ಸದಾ ಹಸಿರಾಗಿರಲಿ.

Wednesday, May 20, 2009

at 8:16:00 PM Posted by Srikanth - ಶ್ರೀಕಾಂತ 3 comments

ಅರ್ಕರಶ್ಮಿಯು ದಾರಿದೀಪವು; ಹಸುರು ಎಲೆಗಳ ಚಾಮರ;
ಪಕ್ಷಿಕುಕ್ಷಿಯೊಳಿಂದ ಹೊಮ್ಮಿದ ಇಂಪಿನಾದರ ಸ್ವಾಗತ |
ಏರುದಾರಿಯ ಮೆಲ್ಲಮೆಲ್ಲನೆ ಹೆಜ್ಜೆಹೆಜ್ಜೆಯೆ ಮೆಟ್ಟಲು
ದಟ್ಟದಡವಿಯ ಹೊದಿಗೆ ಹೊದ್ದ ಮಲೆಯೊಡೆಯನನ್ನೇರಲು ||

ಅವನಿಯಾಳದಿ ಹುಟ್ಟಿ ಬಂದಿಹ, ಗಗನದಿಂದಲಿ ಇಳಿದಿಹ,
ಪ್ರಾಣಶಕ್ತಿಯ ಹಸಿರನುಳಿಸುವ ಹಸಿರ ಚುಂಬಿಸಿ ಬಂದಿಹ, |
ಬಿಂಬ ಹಸಿರಿನದೆಲ್ಲವನ್ನೂ ದರ್ಶದಂತೆಯೆ ತೋರುವ,
ಅಂಬುಧಾರೆಯ ಚುಂಬಿಸಿದ ನಾಲಗೆಯು ಧನ್ಯವು ಎಮ್ಮದು ||

ಬತ್ತಲಾಗುವುದಿಲ್ಲವೀ ಮಲೆಮಾಲೆಯಾಗರವೆಂದಿಗೂ
ಬತ್ತಲಾರದು ಮಲೆಯ ಮೈಯ್ಯನು ಮುಚ್ಚಿರುವ ಹಸಿರೆಂದಿಗೂ |
ಏರುದೇಶದ ಮೇಲೆ ನಿಂತೀ ದೇಶದೀಕ್ಷಣೆ ಮಾಡು ನೀ
ಸೇರಿಸಕ್ಷಿಯ ದಾರಿಯಿಂದಲಿ ಮನಸ ನಾಕಕೆ ಬೇಗ ನೀ ||

ಒಮ್ಮೆಲೆಯೆ ಎಲ್ಲಿಂದಲೋ ಆವರಿಸಿಬಿಟ್ಟಿತು ಗಗನವ
ಅರ್ಕರಶ್ಮಿಯ ಭುವಿಯ ದಾರಿಯ ಮುಚ್ಚಿತೊಡನೆಯೆ ಮೇಘವು |
ವಾರಿಧಾರಿಯ ಸೀಳಿ ಮಿಂಚಿತು; ಜಗದಲೆಲ್ಲೆಡೆ ಗುಡುಗಿತು
ವಾರಿಶರಗಳು ಇಳಿದು ಬಂದವು ಬಿಡುವು ನೀಡದೆ ಭೂಮಿಗೆ ||

ಜೀವಸಂಕುಲಕಂಬುಸುಧೆಯನ್ನುಣಿಸಿ ವರ್ಷವು ನಿಲ್ಲಲು
ನಗುವ ಹೂಗಳು, ಹೊಳೆವ ಜಲಮಣಿರಾಶಿಯೇ ಎಲ್ಲೆಲ್ಲಿಯೂ |
ನೋಡಲಕ್ಷಿಯು ಸಾಲದಾಗಲು ಅಂಥ ಅನುಭವವನ್ನು ನಾ
ಶಬ್ದಗಳಲದೆಂತಾದರೂ ವರ್ಣಿಸಲಿ? ತಿಳಿಯದುಪಾಯವು! ||

ಹಸಿರುಗಿರಿವರ್ತುಲದ ಮಧ್ಯದಿ ಸಂಜೆಯಾಗಲು ನಿಲ್ಲಲು
ಹೆಸರಿಸಲಿ ನಾನಾವ ಸೊಬಗನು ಆಗ ನೋಡಿದ ಜಗದಲಿ! |
ತೈಲದೀಪದ ಬೆಳಕಿನಲಿ ಭೋಜನವ ಸವಿದೆವು ಸುಖದಲಿ
ಸುಖದ ನಿದ್ರೆಯು ಕಾಯುತಿತ್ತು ನಮಗೆ ಜೋಗುಳದೊಂದಿಗೆ ||

ಬೆಳಕ ಬಾಗಿಲ ತೆರೆದ ಮರುದಿನ ಸೂರ್ಯ ತಾ ಮುಂಜಾವಲಿ
ಹೊದಿಗೆಯೊಳಗೆ ಬೆಚ್ಚಗಿಟ್ಟು ನಿದ್ರೆಯನು ನಾವೆದ್ದೆವು |
ಇರುಳಲೆಲ್ಲಾ ಎಲೆಯಮೇಲೆ ನಗುತ ಮಲಗಿದ ಹಿಮಮಣಿ
ಸೂರ್ಯರಶ್ಮಿಗೆ ಹೆದರಿಕೊಂಡು ಮಾಯವಾದುದ ಕಂಡೆವು ||

ಹಸಿರುಗಿರಿರಾಜಾಲಯದ ಕಡೆ ಹೆಜ್ಜೆ ಹಾಕುತ ಹೊರಟೆವು
ಉಸಿರಿನಲಿ ಅಮಲತೆಯ ಅನುಭವಿಸುತಲಿ ತೃಪ್ತಿಯ ಕಂಡೆವು |
ಹೆಸರ ಹೇಳಲು ಬಾರದಷ್ಟು ಜೀವವಿವಿಧತೆ ಕಂಡೆವು
ಎತ್ತರೆತ್ತರಕೇರುತೇರುತ ಕೆಳಗೆ ನೋಡುತ ನಲಿದೆವು ||

ಸಾಕು ಸಾಕು ಎಂದು ಸೋತು ಬೀಳುತಿದ್ದ ಕಾಲ್ಗಳ
ಬೇಕು ಬೇಕು ಎಂದು ಸೋಲನು ಒಪ್ಪಲೊಲಿಯದ ಮಾನಸ |
ನೂಕಿ ನೂಕಿ ಬೆನ್ನು ತಟ್ಟಿ ಏರಿಸಿತು ಮಲೆ ಮೇಲ್ಗಡೆ
ನಾಕ! ನಾಕ! ಎಲ್ಲಿ ನೋಡಲಿ? ಎಲ್ಲ ಮೇಘದ ತೇರ್ಗಳೇ! ||

ಸತತ ಬೀಸುತ ಗಾಳಿ ತಳ್ಳಿತು ಮೇಘರಾಶಿಯ ಪಕ್ಕಕೆ
ಅನತಿದೂರಕೆ, ಆ ದಿಗಂತಕೆ, ಹಸಿರ ಎಲ್ಲೆಡೆ ಕಂಡೊಡೆ |
ಮುಷ್ಟಿಯನು ಹಿಡಿದಾಗಸದ ಕಡೆ ಗುದ್ದುತಲಿ ಮನ ಕುಣಿಯಿತು
ಸೃಷ್ಟಿಕರ್ತನ ಕೊಡುಗೆಯನ್ನು ಮರೆಯಲಾಗದೆ ಸೋತಿತು ||